ಅಭಿಪ್ರಾಯ / ಸಲಹೆಗಳು

ಅಂಗರಚನೆ

ಕರ್ನಾಟಕ ಸರ್ಕಾರ
ವಿಷಯ : ಕನ್ನಡ ಪುಸ್ತಕ ಪ್ರಾಧಿಕಾರದ ಅಂಗರಚನೆಗೆ ಅನುಮೋದನೆ ನೀಡುವ ಬಗ್ಗೆ.

ಓದಾಲಾಗಿದೆ:

 1. ಸರ್ಕಾರದ ಆದೇಶ ಸಂಖ್ಯೆ: 38 ಕಪ್ರಧ 91, ದಿನಾಂಕ: 31.10.1991.
  2. ಸರ್ಕಾರದ ಆದೇಶ ಸಂಖ್ಯೆ: 25 ಕಪ್ರಧ 92, ದಿನಾಂಕ: 11.08.1993.
  3. ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಪತ್ರ ಸಂಖ್ಯೆ

DKC/32012/184/2016, ದಿನಾಂಕ: 24.03.2017

 ಪ್ರಸ್ತಾವನೆ:

ಕನ್ನಡ ಪುಸ್ತಕ ಪ್ರಾಧಿಕಾರವನ್ನು ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಮೇಲೆ ಓದಲಾದ ಉಲ್ಲೇಖ (1)ರ ಸರ್ಕಾರದ ಆದೇಶದಲ್ಲಿ ಸಮಿತಿ ರಚನೆಯಾಗಿರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪುಸ್ತಕೋದ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು, ಆಯಾ ಯೋಜನೆಗಳು ನಿರ್ದಿಷ್ಟ ಕಾಲಾವಧಿಯಲ್ಲಿ ಪೂರ್ಣಗೊಳ್ಳಲು ಹಾಗೂ ಯೋಜನೆಗಳ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಉಲ್ಲೇಖ (2)ರ ಸರ್ಕಾರದ ಆದೇಶದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ರಚನೆಯಾಗಿರುತ್ತದೆ. ಪ್ರಾಧಿಕಾರದ ದೈನಂದಿನ ಕೆಲಸಕಾರ್ಯಗಳು ಸುಗಮವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಂಗರಚನೆಗೆ ಸರ್ಕಾರದ ಅನುಮೋದನೆ ನೀಡುವಂತೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರು ಉಲ್ಲೇಖ (3) ಪತ್ರದಲ್ಲಿ ಸರ್ಕಾರವನ್ನು ಕೋರಿರುತ್ತಾರೆ.

          ಕನ್ನಡ ಪುಸ್ತಕ ಪ್ರಾಧಿಕಾರದ ಅಂಗರಚನೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

 ಸರ್ಕಾರದ ಆದೇಶ ಸಂಖ್ಯೆ : ಕಸಂವಾ 57 ಕಸನಿ 2017, ಬೆಂಗಳೂರು
ದಿನಾಂಕ : 07.11.2017

ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇದರ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಪರಿಗಣಿಸಿ ಅನುಬಂಧದಲ್ಲಿರುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಅಂಗರಚನೆಗೆ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-

ಜಿ. ಅನ್ನಪೂರ್ಣ
ಸರ್ಕಾರದ ಅಧೀನ ಕಾರ್ಯದರ್ಶಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಆಡಳಿತ ಕನ್ನಡ

 ಇವರಿಗೆ:

 1. ಮಹಾಲೇಖಪಾಲರು (ಎ ಮತ್ತು ಇ) ಕರ್ನಾಟಕ, ಪಾರ್ಕ್ ಹೌಸ್ ರಸ್ತೆ, ಬೆಂಗಳೂರು.

ಸರ್ಕಾರದ ಆದೇಶ ಸಂಖ್ಯೆ: ಕಸಂವಾ 57 ಕಸನಿ 2017, ದಿನಾಂಕ: 07.11.2017ಕ್ಕೆ ಅನುಬಂಧ

 1. ಈ ಪ್ರಾಧಿಕಾರವನ್ನುಕನ್ನಡ ಪುಸ್ತಕ ಪ್ರಾಧಿಕಾರ’ಎಂದು ಕರೆಯಬಹುದಾಗಿದೆ.
 2. ಪ್ರಾಧಿಕಾರದ ಪ್ರಧಾನ ಕಚೇರಿಯು ಬೆಂಗಳೂರು ನಗರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕಟ್ಟಡದಆವರಣದಲ್ಲಿ ಅಥವಾ ನಿರ್ದೇಶನಾಲಯವು ಹಂಚಿಕೆ ಮಾಡುವ ಬೆಂಗಳೂರಿನ ಇತರ ಯಾವುದೇ ಸ್ಥಳದಲ್ಲಿ ಇರತಕ್ಕದು.
 3. ಪ್ರಾಧಿಕಾರದ ಧ್ಯೇಯೋದ್ದೇಶಗಳು ಈ ಮುಂದಿನಂತೆ ಇರಬೇಕು:
 4. i) ಪ್ರಾಧಿಕಾರವು ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸಿ, ಓದುಗರಲ್ಲಿ ಉತ್ತಮ ವಾಚನಾಭಿರುಚಿಯನ್ನು ಬೆಳೆಸಿ, ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂತೆ ಮಾಡುವ ಒಂದು ಸ್ಥಾಯಿಯಾದ ಸ್ವಾಯತ್ತ ಸಂಸ್ಥೆಯಾಗಿರಬೇಕು ಮತ್ತು ಆ ಮೂಲಕ ಕನ್ನಡದಲ್ಲಿ ಪುಸ್ತಕೋದ್ಯಮವು ಜನಪರವಾಗಿ, ವ್ಯಾಪಕವಾಗಿ, ಸಮಗ್ರ ಚಳವಳಿಯಾಗಿ ಬೆಳೆದು ಭದ್ರವಾಗಿ ಬೇರೂರುವಂತೆ ಮಾಡುವುದು. ಕನ್ನಡ ಪುಸ್ತಕಗಳ ಪ್ರಕಟಣೆಗೆ ಪ್ರೋತ್ಸಾಹ ಧನ, ಬಹುಮಾನ ಮುಂತಾದವುಗಳನ್ನು ನೀಡುವಂತಹ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳುವುದು.
  ii) ಕನ್ನಡದಲ್ಲಿ ಪ್ರಕಟವಾಗಿರುವ ಅತ್ಯುತ್ತಮ, ಸಾಹಿತ್ಯಿಕ, ಮೌಲ್ಯವುಳ್ಳ ಅಪರೂಪವಾದ, ಅಲಭ್ಯವಾಗಿರುವ, ಪ್ರಾಚೀನ ಮತ್ತು ಆಧುನಿಕ, ಸಮಕಾಲೀನ ಸಾಹಿತ್ಯ ಗ್ರಂಥಗಳನ್ನು ಮತ್ತು ಉತ್ತಮ ಜನಪ್ರಿಯ ಪುಸ್ತಕಗಳನ್ನು ಪುನರ್ ಮುದ್ರಿಸುವುದು ಮತ್ತು ಅವಶ್ಯವಿದ್ದಲ್ಲಿ ಅಂತಹ ಪುಸ್ತಕಗಳನ್ನು ಸಂಪಾದನೆ ಮಾಡಿಸಿ, ಸೂಕ್ತ ಮಾಲಿಕೆಯಡಿ ಪ್ರಕಟಿಸುವುದು.
  iii) ವಿದ್ಯಾರ್ಥಿಗಳಿಗೆ, ಶಿಕ್ಷಣಾರ್ಥಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗಾಗಿ ವಿಜ್ಞಾನ, ಮಾನವಿಕ ಹಾಗೂ ಕಲೆಗಳಿಗೆ ಸಂಬಂಧಪಟ್ಟ ಮೂಲಭೂತ ಶೈಕ್ಷಣಿಕ ಪುಸ್ತಕಗಳನ್ನು ಕನ್ನಡದಲ್ಲಿ ಸ್ವತಂತ್ರವಾಗಿ ಬರೆಯಿಸಿ ಪ್ರಕಟಿಸುವುದು. ಮತ್ತು ಆ ಬಗೆಯ ಪ್ರಕಟಣೆಗಳಿಗೆ ಉತ್ತೇಜನ ನೀಡುವುದು.
  iv) ಕನ್ನಡ ಪುಸ್ತಕ ಪ್ರಕಾಶನ ಉದ್ಯಮಕ್ಕೆ ನೆರವು ನೀಡುವ ಸಲುವಾಗಿ ಕನ್ನಡದಲ್ಲಿ ಪ್ರಕಟಿಸಲಾದ ಪುಸ್ತಕಗಳನ್ನು ಆಯ್ಕೆ ಮಾಡುವುದು ಮತ್ತು ಹಾಗೆ ಆಯ್ಕೆ ಮಾಡಲಾದಕನ್ನಡ ಪುಸ್ತಕಗಳನ್ನು ಸಗಟಾಗಿ ಖರೀದಿಸುವುದುಮತ್ತು ಖರೀದಿಸಲಾದ ಪುಸ್ತಕಗಳನ್ನು ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ವಿತರಿಸುವುದು.
  v) ಕನ್ನಡದಲ್ಲಿ ವ್ಯಾಪಕವಾದ ಅಕ್ಷರ, ಪುಸ್ತಕ-ಭಾಷೆ-ಸಾಹಿತ್ಯ-ಸಂಸ್ಕೃತಿ-ಕಲೆ-ವಿಜ್ಞಾನ-ಮಾನವಿಕ-ವಿವಿಧ ಜ್ಞಾನ ಶಾಖೆಗಳು ಇವುಗಳ ಬಗ್ಗೆ ಅರಿವು ಮೂಡಿಸಲು ಅಗತ್ಯವಿರುವಂಥ ಎಲ್ಲಾ ಬಗೆಯ ಕನ್ನಡ ಪುಸ್ತಕಗಳನ್ನು ಬರೆಸುವುದು; ಸಂಪಾದನೆ ಮಾಡಿಸುವುದು ಮತ್ತು ಪ್ರಕಟಿಸುವುದು.
  vi) ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುವ ಮತ್ತು ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ಬಗೆಯ ಪುಸ್ತಕಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸುಲಭ ಹಾಗೂ ಸುವ್ಯವಸ್ಥಿತ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು ಕನ್ನಡ ಪುಸ್ತಕ ಮಾರಾಟ ಮಳಿಗೆಯನ್ನು ಸ್ಥಾಪಿಸುವುದು ಮತ್ತು ಮಾರಾಟ ಮಾಡಲು ಉದ್ದೇಶಿಸುವ ವ್ಯಕ್ತಿ, ಸಂಸ್ಥೆಗಳಿಗೆ ನೆರವು ನೀಡುವುದು.
  vii) ಕನ್ನಡ ಪುಸ್ತಕೋದ್ಯಮದ ಬಗ್ಗೆ ಹಾಗೂ ಸಂಸ್ಕೃತಿ - ಸಾಹಿತ್ಯ-ಸಾಮಾಜಿಕ-ಶೈಕ್ಷಣಿಕ ಮುಂತಾದ ಸೂಕ್ತ ವಿಷಯಗಳ ಬಗ್ಗೆ ಸಂಶೋಧನೆ ನಡೆಸಲು ಫೆಲೋಶಿಫ್ ಹಾಗೂ ಅಧ್ಯಯನ ಯೋಜನೆಗಳಿಗೆ ನೆರವು ನೀಡುವುದು. ಪುಸ್ತಕೋದ್ಯಮದ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿ, ಕಾರ್ಯಾಗಾರ, ಚರ್ಚಾಗೋಷ್ಠಿ, ವಿಚಾರ ಸಂಕಿರಣ, ಸಮ್ಮೇಳನ, ಪುಸ್ತಕ ಮೇಳಗಳನ್ನು ತಾನಾಗಿಯೇ ಅಥವಾ ಸಮಾನ ಉದ್ದೇಶ ಹೊಂದಿದ ಇತರ ಸಂಘ ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ಏರ್ಪಡಿಸುವುದು.
  viii) ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುವಂತಹ ಮತ್ತು ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವಂತಹ ಇತರೆ ಸರ್ಕಾರಿ, ಅರೆಸರ್ಕಾರಿ, ಅನುದಾನ ಪಡೆಯುವ ಸ್ವಾಯತ್ತ, ಖಾಸಗಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು, ಪ್ರಾಧಿಕಾರದ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಕೈಗೊಳ್ಳುವಂತಹ ಕಾರ್ಯಚಟುವಟಿಕೆಗಳಲ್ಲಿ ಸಹಕರಿಸುವುದು.
  ix) ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಹಾಗೂ ಧ್ಯೇಯೋದ್ದೇಶಗಳ ಸಾಧನೆಗಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಇತರ ರಾಜ್ಯ ಸರ್ಕಾರ / ಸರ್ಕಾರಗಳಿಂದ ಅನುದಾನ ಪಡೆಯುವ ಸ್ವಾಯತ್ತ ಅರೆಸರ್ಕಾರಿ, ಖಾಸಗಿ ಮತ್ತು ವಿದೇಶಗಳಲ್ಲಿರುವ ಸಂಘ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಅವುಗಳಿಂದ / ಖಾಸಗಿ ವ್ಯಕ್ತಿಗಳಿಂದ ಅನುದಾನಗಳು, ಕೊಡುಗೆಗಳು, ದತ್ತಿಗಳು ಮತ್ತು ಇತರೆ ಯಾವುದೇ ರೀತಿಯ ಮೂಲಕ ನಿಧಿಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಆಯಾ ಉದ್ದೇಶ ಸಾಧನೆಗಾಗಿ ವಿನಿಯೋಗಿಸುವುದು.
 5. ಪ್ರಾಧಿಕಾರದ ಸಂರಚನೆ
  ಇನ್ನು ಮುಂದೆ ಪ್ರಾಧಿಕಾರ ಎಂದರೆ ‘ಕನ್ನಡ ಪುಸ್ತಕ ಪ್ರಾಧಿಕಾರ’ ಎಂದು ಅರ್ಥ. ಈ ಪ್ರಾಧಿಕಾರವು ಈ ಕೆಳಕಂಡಂತೆ ಸದಸ್ಯರನ್ನೊಳಗೊಂಡಸರ್ವ ಸದಸ್ಯ ಮಂಡಳಿ/ಆಡಳಿತ ಮಂಡಳಿಯನ್ನು ಹೊಂದಿರತ್ತದೆ.

ಅ) ಅಧ್ಯಕ್ಷರು
ಆ) ಕನ್ನಡ ಪುಸ್ತಕ ಪ್ರಕಾಶಕರು  -1
ಇ) ಕನ್ನಡ ಪುಸ್ತಕ ಮಾರಾಟಗಾರರು / ವಿತರಕರು  -1
ಈ) ಕನ್ನಡ ಲೇಖಕರು -3
ಉ) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು -1
ಊ) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು -1
ಎ) ಹಣಕಾಸು ಇಲಾಖೆಯ ಉಪ-ಕಾರ್ಯದರ್ಶಿಗಳು -1
ಏ) ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರು -1
ಐ) ಸರ್ಕಾರಿ ಮುದ್ರಣಾಲಯದ ನಿರ್ದೇಶಕರು -1
ಒ) ಆಡಳಿತಾಧಿಕಾರಿಗಳು -1

 1. ರಾಜ್ಯ ಸರ್ಕಾರವು ಮೇಲ್ಕಂಡಂತೆ ಕನ್ನಡದ ಪ್ರಸಿದ್ಧ ಹಾಗೂ ಗಣ್ಯ ಸಾಹಿತಿಗಳನ್ನು ಅಥವಾ ವಿದ್ವಾಂಸರನ್ನು ಅಥವಾ ಈ ಕ್ಷೇತ್ರದಲ್ಲಿ ಅನುಭವ ಹಾಗೂ ಪರಿಣತಿ ಉಳ್ಳವರನ್ನು ಅಧ್ಯಕ್ಷರನ್ನಾಗಿ ಮತ್ತು (ಆ), (ಇ)(ಈ)ನಲ್ಲಿನ ಸದಸ್ಯರನ್ನು ನಾಮನಿರ್ದೇಶನ ಮಾಡತಕ್ಕದು. ಇದು ಸ್ಥಾಯಿ ಸಮಿತಿ/ಕಾರ್ಯಕಾರಿ ಸಮಿತಿಯಾಗಿ ಕೆಲಸ ನಿರ್ವಹಿಸುವುದು. ಈ ಸಮಿತಿಯು ಸರ್ಕಾರಿ ನಿಯಮಗಳನ್ನು ಗಮನದಲ್ಲಿರಿಸಿ, ಕೆಲಸ ನಿರ್ವಹಿಸತಕ್ಕದ್ದು. ಉಳಿದಂತೆ ಸರ್ಕಾರಿ ಸದಸ್ಯರುಗಳು ಖಾಯಂ ಪದನಿಮಿತ್ತ ಸದಸ್ಯರಾಗಿದ್ದು, ಪ್ರತ್ಯೇಕ ಸರ್ಕಾರಿ ಆದೇಶದ ಅಗತ್ಯವಿರುವುದಿಲ್ಲ. ಒಟ್ಟಾರೆ 12 ಮಂದಿ ಸದಸ್ಯರನ್ನು ಒಳಗೊಂಡು ಆಡಳಿತ ಮಂಡಳಿಯ ಅಸ್ತಿತ್ವವಿರುತ್ತದೆ.
 2. ಪ್ರಾಧಿಕಾರದ ಸ್ಥಾಯಿ ಸಮಿತಿಯ ಅಧಿಕಾರಾವಧಿ ಸರ್ಕಾರ ಸಮಿತಿಯನ್ನು ರಚಿಸಿದ ದಿನಾಂಕದಿಂದ ಮೂರು ವರ್ಷಗಳಾಗಿರಬೇಕು ಅಥವಾ ಮುಂದಿನ ಸರ್ಕಾರಿ ಆದೇಶ ಬರುವವರೆಗೆ ಯಾವುದು ಮೊದಲೋ ಅಲ್ಲಿಯವರೆವಿಗೆ ಅಧಿಕಾರದಲ್ಲಿರಬೇಕು.
 3. ಪ್ರಾಧಿಕಾರದ ಅಧಿಕಾರ ವರ್ಗ :

ಅ) ಅಧ್ಯಕ್ಷರು
ಆ) ಆಡಳಿತಾಧಿಕಾರಿ

 1. ಅಧ್ಯಕ್ಷರು
 2. ಅಧ್ಯಕ್ಷರು ಪ್ರಾಧಿಕಾರದ ಮುಖ್ಯಸ್ಥರಾಗಿರತಕ್ಕದ್ದು, ಅವರು ಪ್ರಾಧಿಕಾರದ ಎಲ್ಲಾ ಉಪಸಮಿತಿಗಳ ಹಾಗೂ ತಜ್ಞರ ಸಮಿತಿಗಳ ಪದನಿಮಿತ್ತ ಅಧ್ಯಕ್ಷರಾಗಿರಬೇಕು.
  ii. ಅಧ್ಯಕ್ಷರು ಪ್ರಾಧಿಕಾರದ ಕಾರ್ಯಚಟುವಟಿಕೆಗಳನ್ನು ನಿಯತಕಾಲಿಕವಾಗಿ ಸಮೀಕ್ಷೆ ನಡೆಸಿ ಅದರ ಯುಕ್ತ ಪ್ರಗತಿಗೆ ಸೂಕ್ತವಾದಂಥ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡತಕ್ಕ ಅಧಿಕಾರವನ್ನು ಹೊಂದಿರತಕ್ಕದ್ದು.
  iii. ಅಧ್ಯಕ್ಷರು, ಪ್ರಾಧಿಕಾರದ ಆಡಳಿತ ಸಮಿತಿ/ಸ್ಥಾಯೀ ಸಮಿತಿಯೊಡನೆ ಸಮಾಲೋಚನೆ ನಡೆಸದೆ ಪ್ರತಿವರ್ಷಕ್ಕೆ ಗರಿಷ್ಠ ರೂ.50,000/-ಗಳಷ್ಟು ಮೊತ್ತವನ್ನು, ಆದರೆ ಪ್ರತಿ ಸಂದರ್ಭದಲ್ಲಿಯೂ ರೂ.10,000/-ಗಳ ಮಿತಿಗೊಳಪಟ್ಟು ತುರ್ತು ಸ್ವರೂಪದ ಯಾವುದೇ ಕಾರ್ಯವನ್ನು ನೆರವೇರಿಸಲು ವೆಚ್ಚ ಮಾಡುವ ಅಧಿಕಾರ ಹೊಂದಿರತಕ್ಕದ್ದು, ಅನಂತರದಲ್ಲಿ ಅಂತಹ ವೆಚ್ಚದ ವಿವರಗಳನ್ನು ಅಧ್ಯಕ್ಷರು ಆಡಳಿತ ಸಮಿತಿಯ ಮುಂದೆ ಇರಿಸಿ ಅನುಮೋದನೆ ಪಡೆಯಬೇಕಿರುತ್ತದೆ.
 3. ಆಡಳಿತಾಧಿಕಾರಿ:
 4. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಹಂತದ ಅಧಿಕಾರಿಯನ್ನು ಪೂರ್ಣಕಾಲದ ಆಡಳಿತಾಧಿಕಾಯಾಗಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ನೇಮಕ ಮಾಡಬೇಕು.
  II. ಆಡಳಿತಾಧಿಕಾರಿ ಪ್ರಾಧಿಕಾರದ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿರತಕ್ಕದ್ದು ಮತ್ತು ಅವರು ಎಲ್ಲ ಉಪಸಮಿತಿಗಳ ಅಥವಾ ತಜ್ಞ ಸಮಿತಿಗಳ ಸಂಚಾಲಕರಾಗಿರಬೇಕಾಗಿರುತ್ತದೆ.
  III. ಆಡಳಿತಾಧಿಕಾರಿಯವರು ಸಂಚಾಲಕರಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲೆಕ್ಕಾಧಿಕಾರಿಯವರ ಜಂಟಿ ಸಹಿಯೊಂದಿಗೆ ಹಣಕಾಸು ವ್ಯವಹಾರ ನಿರ್ವಹಿಸುವ ಅಧಿಕಾರ ಹೊಂದಿರುತ್ತಾರೆ.
  IV. ಆಡಳಿತಾಧಿಕಾರಿಗಳು ಪ್ರಾಧಿಕಾರದ ಆಡಳಿತಾತ್ಮಕ ಮೇಲ್ವಿಚಾರಣೆಗೆ ಹೊಣೆಗಾರರಾಗಿರತಕ್ಕದ್ದು, ಅವರು ಪ್ರಾಧಿಕಾರದ ಸ್ವತ್ತು ಹಾಗೂ ದಾಖಲೆಗಳನ್ನು ಸಂರಕ್ಷಣೆ ಮಾಡಬೇಕಾಗಿರುತ್ತದೆ.
  V. ಪ್ರಾಧಿಕಾರದ ಅಧ್ಯಕ್ಷರು ಮತ್ತು ಪ್ರಾಧಿಕಾರದ ಆಡಳಿತ ಮಂಡಳಿಯು ಆಯವ್ಯಯ ಅಂದಾಜಿಗನುಸಾರವಾಗಿ ಹಾಗೂ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಮಂಜೂರು ಮಾಡಿದ ಹಣವನ್ನು ಆಯಾ ಉದ್ದೇಶಗಳಿಗೆ ವಿನಿಯೋಗವಾಗುವಂತೆ ಹಾಗೂ ಒಟ್ಟಾರೆ ಪ್ರಾಧಿಕಾರದ ನಿಧಿಗಳು ನಿಯಮಾನುಸಾರ ಬಳಕೆಯಾಗುವಂತೆ ನೋಡಿಕೊಳ್ಳಲು ಆಡಳಿತಾಧಿಕಾರಿಗಳು ಹೊಣೆಗಾರರಾಗಿರಬೇಕು. ಸಂಘಟನಾ ವೆಚ್ಚ ಭರಿಸಲು ರೂ.25,000-00ಗಳ ಮಿತಿಯಲ್ಲಿ ಮುಂಗಡ ಹಣ ಪಡೆಯಲು ಆಡಳಿತಾಧಿಕಾರಿಗಳು ಅಧಿಕಾರ ಹೊಂದಿರಬೇಕು.
  VI. ಕಛೇರಿ ಸಾದಿಲ್ವಾರು ವೆಚ್ಚಗಳನ್ನು ಭರಿಸಲು ಒಂದು ಬಾರಿಗೆ ರೂ. 3000-00ಗಳನ್ನು ಡ್ರಾ ಮಾಡಲು ಆಡಳಿತಾಧಿಕಾರಿಗಳು ಅಧಿಕಾರ ಹೊಂದಿರಬೇಕು.
  VII. ಆಡಳಿತಾಧಿಕಾರಿಗಳು ಪ್ರಾಧಿಕಾರದ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಹಾಗೂ ಅವುಗಳಿಗೆ ಜವಾಬ್ದಾರರಾಗಿರಬೇಕು.
  VIII. ಪ್ರಾಧಿಕಾರದ ಪರವಾಗಿಎಲ್ಲಾ ಅಧಿಕೃತ ಪತ್ರ ವ್ಯವಹಾರಗಳನ್ನು ನಡೆಸಬೇಕಾಗಿರುತ್ತದೆ.
  IX. ಪ್ರಾಧಿಕಾರದ ಸಭೆಗಳ ಬಗ್ಗೆ ನೋಟೀಸು ನೀಡುವುದು, ಅವುಗಳ ನಡವಳಿ ತಯಾರಿಸುವುದು, ಅವುಗಳಿಗನುಸಾರವಾಗಿ ಕಾರ್ಯನಿರ್ವಹಿಸುವುದು ಅವರ ಕರ್ತವ್ಯವಾಗಿರುತ್ತದೆ.
  X. ಅಧ್ಯಕ್ಷರ ಅಪ್ಪಣೆ ಮೇರೆಗೆ ಪ್ರಾಧಿಕಾರದ ಪರವಾಗಿ ಎಲ್ಲಾ ಒಪ್ಪಂದಗಳಿಗೆ ಸಹಿ ಹಾಕುವ ಅಧಿಕಾರವನ್ನು ಅವರು ಹೊಂದಿರುತ್ತಾರೆ. ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳು ಅಧ್ಯಕ್ಷರ ಆದೇಶದಂತೆ ನಿರ್ವಹಿಸುವುದು.
  XI. ಪ್ರಾಧಿಕಾರದ ನಿಯಮ, ನಿಬಂಧನೆ ಹಾಗೂ ಅಧ್ಯಕ್ಷರು ಮತ್ತು ಪ್ರಾಧಿಕಾರ ಮಂಡಳಿಯ ನಿರ್ಣಯಗಳಿಗನುಸಾರವಾಗಿ ಹಾಗೂ ಧ್ಯೇಯೋದ್ದೇಶಗಳಿಗನುಗುಣವಾಗಿ ಪ್ರಾಧಿಕಾರದ ನಿಧಿಗಳನ್ನು ಆಡಳಿತಾಧಿಕಾರಿಗಳು ವೆಚ್ಚ ಮಾಡಬೇಕು.
  XII. ಪ್ರಾಧಿಕಾರದ ಹೆಸರಿನಲ್ಲಿ ಬ್ಯಾಂಕು ಖಾತೆಗಳನ್ನು ತೆರೆಯುವ ಹಾಗೂ ಅಂಥ ಖಾತೆಗಳಲ್ಲಿ ಪ್ರಾಧಿಕಾರದ ನಿಧಿಗಳನ್ನು ಇರಿಸುವ ಮತ್ತು ಅಂತಹ ನಿಧಿಗಳನ್ನು ನಿರ್ವಹಿಸುವ ಹಾಗೂ ಚೆಕ್ ಗಳಿಗೆ ಸಹಿ ಹಾಕಿ ಹಣ ತೆಗೆಯುವ ಅಧಿಕಾರವನ್ನು ಆಡಳಿತಾಧಿಕಾರಿಗಳು ಹೊಂದಿರಬೇಕು.
  XIII. ಅಸಾಧಾರಣ, ಸಂಧರ್ಭಗಳಲ್ಲಿ ಅಂದರೆ ನಿಯಮಾನುಬದ್ಧವಾಗಿ ಆಡಳಿತ ಮಂಡಳಿಯು ಅಸ್ಥಿತ್ವದಲ್ಲಿ ಇಲ್ಲದ ಸಂದರ್ಭದಲ್ಲಿ ಪ್ರಾಧಿಕಾರದ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವ ಮತ್ತು ಅಧಿಕಾರವನ್ನು ಚಲಾಯಿಸುವ ಅಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಅಧ್ಯಕ್ಷರ ಅಧಿಕಾರವನ್ನು ವಹಿಸಿ ಕಾರ್ಯನಿರ್ವಹಿಸಬೇಕು. ಪರಂತು ಆಡಳಿತ ಮಂಡಳಿಯ ಸರ್ಕಾರಿ ಸದಸ್ಯರೊಡನೆ ಸಮಾಲೋಚಿಸಿ ಅಂತಹ ಕಾರ್ಯಗಳನ್ನು ನಿರ್ವಹಿಸಬೇಕು ಮತ್ತು ಅಧಿಕಾರಗಳನ್ನು ಚಲಾಯಿಸಬೇಕು.
 5. ಪ್ರಾಧಿಕಾರದ ನಡವಳಿಗಳು:
 6. i) ಅಧ್ಯಕ್ಷರು ನಿರ್ಧರಿಸುವ ದಿನಾಂಕ, ಸಮಯ ಮತ್ತು ಸ್ಥಳಗಳಲ್ಲಿ ಪ್ರಾಧಿಕಾರದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆ ಸೇರತಕ್ಕದ್ದು, ಪ್ರಾಧಿಕಾರದ ದಕ್ಷ ಕಾರ್ಯನಿರ್ವಹಣೆಯ ಸಲುವಾಗಿ ಕನಿಷ್ಠ 3 ತಿಂಗಳಿಗೊಮ್ಮೆ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವಸದಸ್ಯರ ಸಭೆಯು ಗರಿಷ್ಟ 4 ತಿಂಗಳಿಗೊಮ್ಮೆ ಸಭೆ ಸೇರಬೇಕು
  ii) ಪ್ರಾಧಿಕಾರದ ಎಲ್ಲ ಸಭೆಗಳನ್ನು ಸಭಾ ಸೂಚನೆಗಳನ್ನು ಕಳುಹಿಸಿಕೊಡುವುದರ ಮೂಲಕ ಆಡಳಿತಾಧಿಕಾರಿ ಕರೆಯಬೇಕು.
  iii) ಪ್ರಾಧಿಕಾರದ ಅಧ್ಯಕ್ಷರು ಎಲ್ಲಾ ಸಭೆಗಳ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಅವರ ಅನುಪಸ್ಥತಿಯಲ್ಲಿ ಹಾಜರಿರುವ ಸದಸ್ಯರ ಪೈಕಿ ಒಬ್ಬರನ್ನು ಅಂತಹ ಸಭೆಯ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಬೇಕು.
  iv) ಆಡಳಿತಮಂಡಳಿಯ ಸಭೆಯ ಅವಶ್ಯ ಹಾಜರಿ ಸಂಖ್ಯೆಯು ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟಿರಬೇಕು.
  v) ಎಲ್ಲ ವಿವಾದಾಸ್ಪದ ವಿಷಯಗಳನ್ನು ಹಾಜರಿರುವ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸಬೇಕು.
  vi) ಸ್ಥಾಯಿ ಸಮಿತಿ ಸಭೆಯ ಪ್ರತಿಯೊಬ್ಬರೂ ಒಂದು ಮತವನ್ನು ಹೊಂದಿರತಕ್ಕದು. ಮತಗಳು ಸಮಾನವಾಗಿ ಬಂದ ಸಂದರ್ಭದಲ್ಲಿ ಅಧ್ಯಕ್ಷರು ತಮ್ಮ ನಿರ್ಣಾಯಕ ಮತವನ್ನು ಚಲಾಯಿಸಬೇಕು.
  vii) ಅಧ್ಯಕ್ಷರು ತಾವು ಅವಶ್ಯವೆಂದು ಭಾವಿಸುವಂಥ ಅಧಿಕಾರಗಳನ್ನು ಲಿಖಿತ ಮೂಲಕ ಆಡಳಿತಾಧಿಕಾರಿಗಳಿಗೆ ಪ್ರತ್ಯಾಯೋಜಿಸಬೇಕು.

 7. ಪ್ರಶಸ್ತಿಗಳು-ಬಹುಮಾನಗಳು-ಪ್ರೋತ್ಸಾಹಧನ
 8. i) ಪ್ರಶಸ್ತಿಗಳು

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ - ರೂ.1,00,000-00
ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ - ರೂ.75,000-00
ಡಾ, ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ - ರೂ.50,000-00
ಡಾ, ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ - ರೂ.25,000-00

 1. ii) ಬಹುಮಾನಗಳು

ಪುಸ್ತಕ ಸೊಗಸು ಪ್ರಥಮ ಬಹುಮಾನ - ರೂ.25,000-00
ಪುಸ್ತಕ ಸೊಗಸು ದ್ವಿತೀಯ ಬಹುಮಾನ - ರೂ.20,000-00
ಪುಸ್ತಕ ಸೊಗಸು ತೃತೀಯ ಬಹುಮಾನ - ರೂ.15,000-00
ಮುಖ ಪುಟ ಚಿತ್ರ ವಿನ್ಯಾಸ ಬಹುಮಾನ - ರೂ.10,000-00
ಮುಖ ಪುಟ ಚಿತ್ರ ಕಲೆಯ ಬಹುಮಾನ - ರೂ.8,000-00
ಮಕ್ಕಳ ಪುಸ್ತಕ ಬಹುಮಾನ - ರೂ.8,000-00
(ಸಮಿತಿ ವಿವೇಚನೆಗೊಳಪಟ್ಟು ಆಯ್ಕೆ ನಿಯಮವನ್ನು ರೂಪಿಸಬಹುದು / ಪರಿಷ್ಕರಿಸಬಹುದು)

iii) ಪ್ರೋತ್ಸಾಹಧನ

35 ವರ್ಷದ ಒಳಗಿನ ಲೇಖಕರಿಗೆ ಅವರ ಮೊದಲ ಕೃತಿ ಮುದ್ರಣಕ್ಕೆ ರೂ.15,000-00ಗಳ ಪ್ರೋತ್ಸಾಹಧನವನ್ನು ನೀಡುವುದು. (ಸಮಿತಿ ವಿವೇಚನೆಗೊಳಪಟ್ಟು ಆಯ್ಕೆ ನಿಯಮಗಳನ್ನು ರೂಪಿಸಬಹುದು ಹಾಗೂ ಪರಿಷ್ಕರಿಸಬಹುದಾಗಿದೆ.)

 1. ಸಗಟು ಖರೀದಿ
 2. i) ಪ್ರತಿ ಶೀರ್ಷಿಕೆಗೆ ಗರಿಷ್ಠ ರೂ.7000-00ಗಳು ಮಿರದಂತೆ ಅಥವಾ ಪುಸ್ತಕದ 150 ಪ್ರತಿ ಮಿರದಂತೆ – ಯಾವುದು ಕಡಿಮೆಯೋ ಅಷ್ಟು ಖರೀದಿಸುವುದು
  ii) ಪ್ರಕಾಶಕರ ಬಿಲ್ಲಿನ ಗರಿಷ್ಟ ಮೊತ್ತ ವರ್ಷಕ್ಕೆ ರೂ.00ಲಕ್ಷ ಮಿತಿಯೊಳಗೆ ಅಥವಾ ಗರಿಷ್ಟ 14 ಶೀರ್ಷಿಕೆಗಳು ಇದರಲ್ಲಿ ಯಾವುದು ಕಡೆಮೆಯೋ ಅದನ್ನು ಖರೀದಿಸುವುದು.
  iii) ಒಬ್ಬರೇ ಲೇಖಕರ ಗರಿಷ್ಠ 5 ಶೀರ್ಷಿಕೆ ಮಿರದಂತೆ ಖರೀದಿಸುವುದು.
  iv) ಆಯ್ಕೆಯಾದ ಪುಸ್ತಕಗಳ ಕಾಗದದ ಗುಣಮಟ್ಟದ, ದೃಢೀಕರಣ ಹಾಗೂ ಬೆಲೆ ನಿಗದಿಯನ್ನು ಸರ್ಕಾರಿ ಮುದ್ರಣಾಲಯ ಹಾಗೂ ಲೇಖನ ಸಾಮಗ್ರಿ ಇಲಾಖೆಯಿಂದ ನಿರ್ವಹಿಸುವುದು.
  (ಸಮಿತಿ ವಿವೇಚನೆಗೊಳಪಟ್ಟು ಆಯ್ಕೆ ನಿಯಮಗಳನ್ನು ರೂಪಿಸಬಹುದು / ಪರಿಷ್ಕರಿಸಬಹುದು.)
 3. ಪ್ರಾಧಿಕಾರದ ಅಧಿಕಾರ ಮತ್ತು ಕರ್ತವ್ಯಗಳು:
 4. i) ಪ್ರಾಧಿಕಾರದ ಎಲ್ಲ ವ್ಯವಹಾರಗಳನ್ನು ಪ್ರಾಧಿಕಾರದ ನಿಯಮ ನಿಬಂಧನೆಗಳು ಮತ್ತು ಕಾಲಕಾಲಕ್ಕೆ ಕರ್ನಾಟಕ ಸರ್ಕಾರವು ಹೊರಡಿಸುವ ಆದೇಶಗಳು, ನಿರ್ದೇಶನಗಳಿಗನುಸಾರವಾಗಿ ಆಡಳಿತ ಮಂಡಳಿಯು ನಿರ್ವಹಿಸತಕ್ಕದು, ನಿಯಂತ್ರಿಸಬೇಕು ಮತ್ತು ನಿರ್ದೇಶಿಸಬೇಕು.
  ii) ಆಡಳಿತ ಮಂಡಳಿಯು ಪ್ರಾಧಿಕಾರದ ಎಲ್ಲಾ ವ್ಯವಹಾರಗಳನ್ನು ಮತ್ತು ನಿಧಿಗಳ ನಿರ್ವಹಣೆಯನ್ನು ಹೊಂದಿರತಕ್ಕದು ಮತ್ತು ಕರ್ನಾಟಕ ಸರ್ಕಾರವು ಹಣಕಾಸು ವೆಚ್ಚಕ್ಕೆ ಸಂಬಂಧಿಸಿದಂತೆ, ಕಾಲಕಾಲಕ್ಕೆ ಹೊರಡಿಸುವ ನಿರ್ಬಂಧಗಳಿಗೊಳಪಟ್ಟು ಪ್ರಾಧಿಕಾರದ ಹಣಕಾಸಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಗಳನ್ನು ಚಲಾಯಿಸಲು ಅಧಿಕಾರ ಹೊಂದಿರಬೇಕು.
  iii) ಪ್ರಾಧಿಕಾರದ ನಿಯಮ ನಿಬಂಧನೆಗಳೊಗೊಳಪಟ್ಟ ಪ್ರಾಧಿಕಾರದ ಧ್ಯೇಯೋದ್ದೇಶಗಳಿಗೆ ಅವಶ್ಯವಿರುವಂಥ ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ಆಡಳಿತ ಮಂಡಳಿಯ ಅನುಮೋದನೆ ಪಡೆದು, ಅವಶ್ಯಕತೆಗನುಸಾರವಾಗಿ ಘಟನೋತ್ತರ ಅನುಮೋದನೆ ಪಡೆದು ನಡೆಸಲು ಸ್ಥಾಯಿ ಸಮಿತಿ ಅಧಿಕಾರ ಹೊಂದಿರಬೇಕು.
  ಪ್ರಾಧಿಕಾರದ ಸಲುವಾಗಿ ಯೋಜನೆ, ಕಾರ್ಯಕ್ರಮಗಳನ್ನು ತಯಾರಿಸುವುದು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವುದು.
  ii. ಪ್ರಾಧಿಕಾರವನ್ನು ನಿರ್ವಹಿಸಲು, ಅದರ ಆಡಳಿತ ನಡೆಸಲು ಮತ್ತು ಕಾರ್ಯಗಳನ್ನು ಜಾರಿಗೊಳಿಸಲು ಅವಶ್ಯವಿರುವಷ್ಟು ಹಣವನ್ನು ವೆಚ್ಚ ಮಾಡುವುದು.
  iii. ಅನುದಾನ ಕೊಡುಗೆಗಳನ್ನು ಸ್ವೀಕರಿಸುವುದು ಮತ್ತು ಪುಸ್ತಕಗಳ ಮಾರಾಟದ ಉತ್ಪತ್ತಿ ಹಾಗೂ ವಸೂಲಿ ಮಾಡುವ ಇತರೆ ಬಗೆಯ ಶುಲ್ಕಗಳನ್ನು ಲೆಕ್ಕ ಇಡುವುದು.
  iv. ಪ್ರಾಧಿಕಾರದ ಕಾರ್ಯ ನಿರ್ವಹಣೆಗೆ ಬೇಕಾದ ಸ್ಥಿರ ಅಥವಾ ಚರ ಸ್ವತ್ತುಗಳನ್ನು ನಿರ್ಮಿಸುವುದು; ಖರೀದಿಸುವುದು, ಗುತ್ತಿಗೆ ಪಡೆಯುವುದು, ಬಾಡಿಗೆಗೆ ಪಡೆಯುವುದು.
  v. ಪ್ರಾಧಿಕಾರಕ್ಕೆ ಸೇರಿದ ಚರ ಅಥವಾ ಸ್ಥಿರ ಸ್ವತ್ತುಗಳನ್ನು ಅಡಮಾನ ಮಾಡಿ ಅಥವಾ ಅಡಮಾನ ಮಾಡದೇ ಅಥವಾ ಬೇರಾವುದೇ ರೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು.
  vi. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಮತ್ತು ಇತರ ಸಾರ್ವಜನಿಕ ಹಾಗೂ ಖಾಸಗಿ ಸಂಘ ಸಂಸ್ಥೆಗಳೊಂದಿಗೆ, ಅರೆಸರ್ಕಾರಿ, ಸ್ವಾಯತ್ತ ಅನುದಾನ ಪಡೆಯುವ ಸಂಸ್ಥೆಗಳೊಂದಿಗೆ ಅಥವಾ ವಿದೇಶೀ ಸಂಘಸಂಸ್ಥೆಗಳು ಮತ್ತು ಖಾಸಗೀ ವ್ಯಕ್ತಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು, ಪರಂತು ಅಂಥ ಒಪ್ಪಂದಗಳು ಪ್ರಾಧಿಕಾರದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿರಬೇಕು.
  vii. ಪ್ರಾಧಿಕಾರಕ್ಕೆ ಸಂಬಂಧಪಟ್ಟ ಕಾನೂನು ವ್ಯವಹರಣೆಗಳ ಸಂಬಂಧದಲ್ಲಿ ಸಂಚಾಲಕರು ಪ್ರಾಧಿಕಾರದ ಪರವಾಗಿ ವ್ಯವಹರಿಸತಕ್ಕದು.
  viii. ಆಯಾ ಆರ್ಥಿಕ ವರ್ಷದ ಆಯವ್ಯಯವನ್ನು ಸಿದ್ಧಪಡಿಸಿ, ಆ ಬಗ್ಗೆ ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆಯನ್ನು ಪಡೆಯತಕ್ಕದ್ದು.
  ix. ಈ ನಿಯಮ ನಿಬಂಧನೆಗಳಿಗೊಳಪಟ್ಟ ಆಡಳಿತ ಮಂಡಳಿಯು ಪ್ರಾಧಿಕಾರಕ್ಕೆ ಅವಶ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸರ್ಕಾರದ ಅನುಮೋದನೆಗಳಿಗೊಳಪಟ್ಟು ಸೇವಾ ನಿಯಮಗಳ ಪ್ರಕಾರ ನೇಮಕ ಮಾಡಿಕೊಳ್ಳಬೇಕು.
  x. ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ ಅವಶ್ಯವಿರುವಂಥ ತಜ್ಞರ ಸಮಿತಿಗಳನ್ನು ಸ್ಥಾಯಿ ಸಮಿತಿಯು ರಚಿಸಿ, ಅವು ನಿರ್ವಹಿಸುವ ಕೆಲಸಗಳಿಗೆ ನಿಯಮಾನುಸಾರ ಪ್ರಯಾಣಭತ್ಯೆ / ದಿನಭತ್ಯೆಯನ್ನು ಪಾವತಿಸುವುದು. ಇಂತಹ ಸಮಿತಿಗಳ ಸದಸ್ಯರ ಸಂಖ್ಯೆ ಸಾಮಾನ್ಯವಾಗಿ ಐದಕ್ಕೆ ಮೀರಬಾರದು. ಅವಶ್ಯವಿದ್ದಲ್ಲಿ ಆಡಳಿತ ಮಂಡಳಿಯ ಸದಸ್ಯರೂ ಇಂತಹ ಉಪಸಮಿತಿಗಳ ಸದಸ್ಯರಾಗಬಹುದು.
  xi. ಎಲ್ಲ ಕನ್ನಡ ಪುಸ್ತಕ ಪ್ರಕಾಶಕರು ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳುವಂತೆ ಉತ್ತೇಜಿಸುವುದು ಹಾಗೂ ಪ್ರಾಧಿಕಾರದ ಯಾವುದೇ ನೆರವಿಗೆ ಈ ನೊಂದಾವಣಿ ಒಂದು ಪೂರ್ವ ಷರತ್ತೆಂದು ವಿಧಿಸುವುದು.
 5. ಹಣಕಾಸು:
 6. ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಅಗತ್ಯಕ್ಕೆ ಅನುಗುಣವಾಗಿ ವಾರ್ಷಿಕ ಅನುದಾನ ನೀಡಬೇಕು. ಪ್ರಾಧಿಕಾರವು ರೂಪಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿಯಮಾನುಸಾರ ವಾರ್ಷಿಕ ಅನುದಾನವನ್ನು ಬಿಡುಗಡೆ ಮಾಡಬೇಕು.
  ii. ಆಡಳಿತ ಮಂಡಳಿಯ ನಿರ್ದೇಶನಕ್ಕೊಳಪಟ್ಟು ಆಡಳಿತಾಧಿಕಾರಿಗಳು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದು ನಿಧಿ ಇಡುವುದು, ನಿರ್ವಹಿಸುವುದು ಮಾಡಬೇಕು.
  iii. ಪ್ರಾಧಿಕಾರವು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಇತರೆ ಯಾವುದೇ ಮೂಲದಿಂದ ಅನುದಾನ, ಕೊಡುಗೆ, ದಾನಗಳ ಮೂಲಕ ನಿಧಿ ಸಂಗ್ರಹಿಸಬಹುದು.
  iv. ಪುಸ್ತಕಗಳ ಮಾರಾಟದ ಹುಟ್ಟುವಳಿಯನ್ನು ಪ್ರಾಧಿಕಾರವೇ ನಿರ್ವಹಿಸಿ ತನ್ನ ಯೋಜನೆಗಳಿಗಾಗಿಯೇ ವಿನಿಯೋಗಿಸಬೇಕು.
  v. ಪ್ರಾಧಿಕಾರ ಪ್ರಕಟಿಸುವ ತನ್ನೆಲ್ಲಾ ಪುಸ್ತಕಗಳ ಬೆಲೆಯನ್ನು ಯಾವುದೇ ಕಾರಣಕ್ಕೂ ಪುಸ್ತಕದ ಉತ್ಪನ್ನದ ವೆಚ್ಚದ ಎರಡು ಪಟ್ಟಿಗಿಂತ ಹೆಚ್ಚಾಗಿ ನಿಗದಿಗೊಳಿಸಕೂಡದು.ಅಥವಾ ಸಮಿತಿಯ ವಿವೇಚನೆಗೊಳಪಟ್ಟು ಇದನ್ನು ಪರಿಷ್ಕರಿಸಬಹುದಾಗಿದೆ.
 7. ಕಾರ್ಯ ನಿರ್ವಹಣೆ ಸಿಬ್ಬಂದಿ :
 8. i) ಪ್ರಾಧಿಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಹೊಣೆ ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು ಆಡಳಿತಾಧಿಕಾರಿಯವರದ್ದಾಗಿರುತ್ತದೆ.
  ii) ಪ್ರಾಧಿಕಾರದ ದೈನಂದಿನ ಆಡಳಿತ ಮತ್ತು ಕಾರ್ಯಕ್ರಮಗಳ ನಿರ್ವಹಣೆಗಾಗಿ ಈ ಮುಂದಿನಂತೆ ಸಿಬ್ಬಂದಿಯನ್ನು ನೇಮಿಸಬೇಕು.

ಅ) ಆಡಳಿತಾಧಿಕಾರಿ (‘ಎ’ ದರ್ಜೆ) 1
ಆ) ಕಾರ್ಯನಿರ್ವಾಹಕ ಅಧಿಕಾರಿ (ಬಿ ದರ್ಜೆ) 1
ಇ) ಲೆಕ್ಕಪತ್ರ ಅಧೀಕ್ಷಕರು 1
ಈ) ಸಹಾಯಕರು (ಸಿ ದರ್ಜೆ) 4
(ಪ್ರಥಮ ದರ್ಜೆ ಸಹಾಯಕರು-2 / ದ್ವಿತೀಯ ದರ್ಜೆ ಸಹಾಯಕರು-2)
ಉ) ದಾಸ್ತಾನು ಗುಮಾಸ್ತ (‘ಸಿ’ ದರ್ಜೆ) (ಪ್ರಥಮ ದರ್ಜೆ ಸಹಾಯಕರು) 1
ಊ ) ಉಗ್ರಾಣಪಾಲಕ (‘ಸಿ’ ದರ್ಜೆ) (ಪ್ರಥಮ ದರ್ಜೆ ಸಹಾಯಕರು) 1
ಎ) ಪ್ಯಾಕರ್/ದಲಾಯಿತ 6
ಏ) ಶೀಘ್ರಲಿಪಿಗಾರರು 1
ಐ) ಕಂಪ್ಯೂಟರ್ ಆಪರೇಟರ್ ( ಮಾರಾಟ ಮಳಿಗೆ) 1

iii) ಪ್ರಾಧಿಕಾರದ ಆಡಳಿತ ನಿರ್ವಹಣೆಗೆ ಈ ಮೇಲಿನಂತೆ ಸಿಬ್ಬಂದಿಯನ್ನು ಸರ್ಕಾರ ನೇಮಿಸಬೇಕು.
iv) ಈ ಎಲ್ಲ ಸಿಬ್ಬಂದಿ ವರ್ಗ ಸಂಚಾಲಕರ ಸಂಪೂರ್ಣ ಆಡಳಿತ ನಿಯಂತ್ರಣಕ್ಕೊಪಟ್ಟಿರಬೇಕು.
v) ಇವರ ಸೇವಾ ಸೌಲಭ್ಯಗಳು ಹಾಗೂ ನಿಯಮಗಳು ಸರ್ಕಾರಿ ನೌಕರರ ನಿಯಮಾವಳಿಗೊಳಪಟ್ಟಿರಬೇಕು.
vi) ಕಾರಣಾಂತರಗಳಿಂದ ನೇಮಕ ಸಾಧ್ಯವಾಗದಿದ್ದ / ತಡವಾದ ಪಕ್ಷದಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಪ್ರಾಧಿಕಾರವು ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಹೊರಗುತ್ತಿಗೆಯಿಂದ ನೇಮಕ ಮಾಡಿಕೊಳ್ಳಬಹುದಾಗಿದೆ

 1. ಲೆಕ್ಕಪತ್ರಗಳು ಹಾಗೂ ಲೆಕ್ಕಪರಿಶೋಧನೆ
 2. ಪ್ರಾಧಿಕಾರವು ತನ್ನೆಲ್ಲ ಹಣ ಹಾಗೂ ಸ್ವತ್ತುಗಳ ಬಗ್ಗೆ ಕ್ರಮಬದ್ಧ ಲೆಕ್ಕಪತ್ರಗಳನ್ನು ನಿರ್ವಹಿಸಿಕೊಂಡು ಬರಬೇಕು.
  ii. ಪ್ರಾಧಿಕಾರದ ಲೆಕ್ಕಪತ್ರಗಳನ್ನು ಕರ್ನಾಟಕ ಸರ್ಕಾರ ಲೆಕ್ಕ ಪತ್ರ ಇಲಾಖೆಯ ಲೆಕ್ಕಪರಿಶೋಧಕರಿಂದ ಪ್ರತಿವರ್ಷವೂ ಲೆಕ್ಕಪರಿಶೋಧನೆ ಮಾಡತಕ್ಕದ್ದು.
  iii. ಲೆಕ್ಕಪರಿಶೋಧನೆಯ ಪರಿಣಾಮಗಳನ್ನು ಲೆಕ್ಕಪರಿಶೋಧಕರು, ಪ್ರಾಧಿಕಾರದ ಆಡಳಿತ ಮಂಡಳಿಗೆ ಒಪ್ಪಿಸತಕ್ಕದ್ದು ಹಾಗೂ ಅದರ ಒಂದು ಪ್ರತಿಯನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿಕೊಡಬೇಕು.
 3. ವಾರ್ಷಿಕ ವರದಿ :

ಪ್ರಾಧಿಕಾರದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಆಡಳಿತ ಮಂಡಳಿಯು ಸಿದ್ಧಪಡಿಸಿ, ಯತೋಚಿತವಾಗಿ ಲೆಕ್ಕಪರಿಶೋಧನೆ ಮಾಡಿಸಿ ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು.


 1. ನಿಯಮಗಳಲ್ಲಿ ಬದಲಾವಣೆ :
  ಪ್ರಾಧಿಕಾರವು ಸರ್ಕಾರದ ಪೂರ್ವಾನುಮೋದನೆಗೊಳಪಟ್ಟು, ಕಾಲಕಾಲಕ್ಕೆ ತನ್ನ ನಿಯಮ ನಿಬಂಧನೆಗಳಲ್ಲಿ ಸೂಕ್ತವೆನಿಸುವಂಥ ಬದಲಾವಣೆಗಳನ್ನು, ವಿಷಯಗಳನ್ನು, ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅಧಿಕಾರ ಹೊಂದಿರಬೇಕು.
  ಪ್ರಶಸ್ತಿ, ಬಹುಮಾನಗಳು, ಪ್ರೋತ್ಸಾಹ ಧನ, ಸಿರಿಗನ್ನಡ ಪುಸ್ತಕ ಮಳಿಗೆ, ಸಗಟು ಖರೀದಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ತನ್ನ ವಿವೇಚನೆಗೊಳಪಟ್ಟು ಮಾರ್ಗಸೂಚಿ ನಿಯಮಗಳನ್ನು ತನ್ನ ಹಂತದಲ್ಲಿಯೇ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

 

ಸಹಿ/-

ಜಿ. ಅನ್ನಪೂರ್ಣ
ಸರ್ಕಾರದ ಅಧೀನ ಕಾರ್ಯದರ್ಶಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಆಡಳಿತ ಕನ್ನಡ

ಇತ್ತೀಚಿನ ನವೀಕರಣ​ : 09-01-2021 11:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080