ಅಭಿಪ್ರಾಯ / ಸಲಹೆಗಳು

ಕನ್ನಡ ಪುಸ್ತಕ ಪ್ರಾಧಿಕಾರ - ಹೆಜ್ಜೆಗುರುತು

  • ಪುಸ್ತಕ ನಮ್ಮ ಬದುಕಿನ ಅಮೂಲ್ಯ ನಿಧಿ
  • ಪುಸ್ತಕ ನಮ್ಮ ಸಂಸ್ಕೃತಿಯ ಪ್ರತೀಕ
  • ಪುಸ್ತಕ ನಮ್ಮ ನಾಡಿನ ತಳಹದಿ
  • ಪುಸ್ತಕ ಸಂಸ್ಕೃತಿಯ ನಿರಂತರ ಪ್ರವಾಹಕ್ಕೆ ಸೇತುವೆ
  • ಪುಸ್ತಕ ಜ್ಞಾನ ವಿತರಣೆಯ ಪ್ರಮುಖ ಮಾಧ್ಯಮ

      ಪುಸ್ತಕ ನಾಡಿನ ಸಂಸ್ಕೃತಿಯ ಪ್ರತೀಕ. ಪುಸ್ತಕ ನಾಗರೀಕತೆಯ ತಳಹದಿ, ಜ್ಞಾನಾರ್ಜನೆಯ ಅಪೂರ್ವ ಮಾಧ್ಯಮ ಒಂದು ಪ್ರಮುಖ ಸಾಧನ. ಅನುಭವ, ಜ್ಞಾನದ ಅಭಿವ್ಯಕ್ತಿ ರೂಪವಾದ ಪುಸ್ತಕ ಸಂಸ್ಕೃತಿಯ ನಿರಂತರ ಪ್ರವಾಹಕ್ಕೆ ಸೇತುವೆ. ತಲೆಮಾರುಗಳ ಮಾನವ ಜ್ಞಾನ ಮತ್ತು ಅನುಭವಗಳು ಉಳಿದುಬಂದಿರುವುದೇ ಲಿಖಿತ ಮಾಧ್ಯಮದ ಮೂಲಕ.

      19ನೇ ಶತಮಾನದಲ್ಲಿ ಆರಂಭವಾದ ಪುಸ್ತಕ ಪ್ರಕಟಣೆ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಲೇಖಕರ ಅಭಿವ್ಯಕ್ತಿ ಸ್ವಾತಂತ್ರ, ಪ್ರಕಾಶಕರ ಉದ್ಯಮಕ್ಕೆ ನೆರವು, ಓದುಗರಿಗೆ ಸುಲಭ ಬೆಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಪ್ರಕಟಗೊಂಡ ಪುಸ್ತಕ ವಾಚನಾಭಿರುಚಿ ಬೆಳಸುವುದು, ಲೇಖಕ-ಪ್ರಕಾಶಕ-ಓದುಗರ ನಡುವೆ ಆರೋಗ್ಯಕರ ಸಂಬಂಧವನ್ನು ಏರ್ಪಡಿಸುವುದು.

      ಪುಸ್ತಕೋಧ್ಯಮ ಜನಪರವಾಗಿ, ಸಮಗ್ರ ಚಳವಳಿಯಾಗಿ ಬೆಳೆದು ಭದ್ರವಾಗಿ ನೆಲೆಯೂರುವಂತೆ ಮಾಡುವುದು ಅಂತರರಾಷ್ಟ್ರೀಯ ಪುಸ್ತಕ ಪ್ರಕಟಣಾ ಪ್ರಪಂಚ ಒಡ್ಡುತ್ತಿರುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಕನ್ನಡ ಪ್ರಕಾಶನ ಉದ್ಯಮ ಸಜ್ಜುಗೊಳಿಸುವುದು. ದಾನಚಿಂತಾಮಣಿ ಅತ್ತಿಮಬ್ಬೆ ಶಾಂತಿಪುರಾಣದ ಒಂದು ಸಾವಿರ ಕೃತಿ ತಯಾರಿಸಿ ದಾನ ಮಾಡಿದಂದೇ ಪ್ರಕಾಶನ ಕ್ಷೇತ್ರ ಹುಟ್ಟಿತೆಂದು ಹೇಳಬಹುದು.

     1817ರಲ್ಲಿ ಕಲ್ಕತ್ತದ ಸೆರಾಂಪುರ್ ಪ್ರಕಾಶನದಲ್ಲಿ ವಿಲಿಯಂ ಕೇರಿ ರಚಿಸಿದ ಗ್ರ್ಯಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್ ಕನ್ನಡದ ಪ್ರಥಮ ಮುದ್ರಿತ ಪುಸ್ತಕ ಎನ್ನಲಾಗುತ್ತದೆ.

      ‘ದೇಶ ಸುತ್ತು ಕೋಶ ಓದು’ ಎಂಬುದು ಜನಜನಿತ ನಾಣ್ಣುಡಿ. ದೇಶ ಸುತ್ತುವುದು ಆಯಾಯ ವ್ಯಕ್ತಿ, ಜನಾಂಗ ಸನ್ನಿವೇಶ-ಸಂದರ್ಭ ಅವಲಂಬಿತವಾಗಿರುತ್ತದೆ. ಆದರೆ ಕೋಶ ಓದುವುದು ಅಕ್ಷರ ಕಲಿತ ಎಲ್ಲರಿಗೂ ದಕ್ಕುವಂಥದ್ದು. ದೇಶ ಸುತ್ತುವ ಪ್ರಕ್ರಿಯೆಗೂ ಕೋಶದ ಓದಿನ ಅರಿವು ಇರಲೇ ಬೇಕಾಗುತ್ತದೆ.

      ಜ್ಞಾನ-ವಿಜ್ಞಾನ, ಸಂಸ್ಕೃತಿ-ಸಂಪ್ರದಾಯ, ಆಗು-ಹೋಗುಗಳು ಎಲ್ಲವನ್ನು ದಕ್ಕಿಸಿಕೊಳ್ಳಲು ಓದಿನ ಮೂಲಕ ಮಾತ್ರ. ಸಾಧ್ಯವಾಗುವುದು. `ಓದು' ಲಭ್ಯವಾಗುವುದು ಲಿಖಿತ ದಾಖಲೆಗಳಿದ್ದಾಗ ಮಾತ್ರ. ಆ ದಾಖಲೆಗಳು ಆಯಾಯ ಭಾಷೆ, ಸಂಸ್ಕೃತಿ, ರೂಢಿ ಮತ್ತು ಜ್ಞಾನದ ಮೇಲೆ ಅವಲಂಬಿತ. ಇವೆಲ್ಲವೂ ಒಂದೆಡೆ ದಕ್ಕುವುದಾದರೆ ಅದು ಗ್ರಂಥ/ಪುಸ್ತಕದಲ್ಲಿ ಮಾತ್ರ.

      ಪುಸ್ತಕವೆನ್ನುವುದು ಒಂದು ಜೀವಿತವನ್ನೇ ಕಟ್ಟುವ, ಸಾಮ್ರಾಜ್ಯವನ್ನೇ ಅಸ್ತಿತ್ವಕ್ಕೆ ತರುವ, ಹಸನಾದ ಬದುಕನ್ನು ಸೃಷ್ಟಿಸುವ ಶಕ್ತಿಶಾಲಿ ದ್ರವ್ಯ. ಇಂಥದ್ದೊಂದು ದ್ರವ್ಯ ಎಲ್ಲರಿಗೂ ತಲುಪುವಂತಾದರೆ ಅರಿವಿನ ಕೀಲಿಕೈ ಸಿಕ್ಕಂತೆಯೇ ಸರಿ.

      `ಗ್ರಂಥಗಳಿಲ್ಲದಿದ್ದಲ್ಲಿ ದೇವರೇ ಮೂಕನಾಗಿಬಿಡುತ್ತಾನೆ; ನ್ಯಾಯದೇವತೆ ನಿದ್ರಿಸುತ್ತಾಳೆ, ವಿಜ್ಞಾನದೇವತೆ ವಿಶ್ರಾಂತಿ ಪಡೆಯುತ್ತಾಳೆ, ತಂತ್ರಜ್ಞಾನ ಕುಂಟುತ್ತದೆ, ಸಾಹಿತ್ಯ ಬಾಯಿಗೆ ಬೀಗ ಹಾಕಿಕೊಂಡುಬಿಡುತ್ತದೆ. ಉಳಿದುದೆಲ್ಲವೂ ಅಂಧಕಾರದಲ್ಲಿ ಅಡಗಿಬಿಡುತ್ತದೆ' ಎಂಬ ಅನುಭವಿಗಳ ಮಾತು ಎಂದಿಗೂ ಪ್ರಸ್ತುತ.

      ಈ ದಿಸೆಯಲ್ಲಿ ಪುಸ್ತಕದ ಮಹತ್ವವನ್ನು ಅರಿತ ಕರ್ನಾಟಕ ಸರ್ಕಾರ 1993ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವನ್ನು ಸ್ಥಾಪಿಸಿತು. ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ರೂಪಿಸಿ, ದೃಢವಾಗಿ, ವ್ಯಾಪಕವಾಗಿ ಮತ್ತು ಸಮಗ್ರವಾಗಿ ಬೆಳೆಸಿ ಭದ್ರವಾಗಿ ಬೇರೂರುವಂತೆ ಮಾಡುವಲ್ಲಿ ಸರ್ಕಾರದ ಕಣ್ಗಾವಲಿರುವ ಒಂದು ಸಂಸ್ಥೆ ಪ್ರಾಧಿಕಾರವಾಗಿ ಅಸ್ತಿತ್ವಕ್ಕೆ ಬಂದಿತು. ಈ ಪ್ರಾಧಿಕಾರವು ಕೆಲವು ಧ್ಯೇಯೋದ್ದೇಶಗಳನ್ನು ಒಳಗೊಂಡು ಅದರ ಪರಿಧಿಯಲ್ಲಿ ಮುನ್ನಡೆಯುತ್ತಿದೆ

 ಅವು:

  • ಕನ್ನಡದ ಲೇಖಕ-ಪ್ರಕಾಶಕ-ಮಾರಾಟಗಾರ ಮತ್ತು ಓದುಗರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದಲ್ಲದೆ ಸೌಹಾರ್ದಯುತ ಸಂಬಂಧವನ್ನು ಬೆಸೆಯುವುದು.
  • ಸಾರ್ವಜನಿಕರಲ್ಲಿ ಉತ್ತಮ ವಾಚನಾಭಿರುಚಿಯನ್ನು ಬೆಳೆಸುವುದು.
  • ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭದ ಬೆಲೆಯಲ್ಲಿ ದೊರಕುವಂತೆ ಮಾಡುವುದು.
  • ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಿ ರಾಜ್ಯಾದ್ಯಂತ ಓದುಗರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.
  • ಕನ್ನಡ ಭಾಷೆ, ಸಾಹಿತ್ಯ ಹಾಗೂ ವಿವಿಧ ಜ್ಞಾನಶಿಸ್ತುಗಳ ಪುಸ್ತಕಗಳನ್ನು ಪ್ರಕಟಿಸುವುದು.
  • ರಾಜ್ಯಾದ್ಯಂತ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸುವುದು.

      ಈ ಧ್ಯೇಯೋದ್ದೇಶಗಳನ್ನು ಒಳಗೊಂಡ ಪ್ರಾಧಿಕಾರವು ಕಳೆದ 24 ವರ್ಷಗಳಿಂದ ಅದಕ್ಕನುಗುಣವಾಗಿ ತನ್ನ ವ್ಯಾಪ್ತಿಯಲ್ಲಿ ಪುಸ್ತಕ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದೆ.

      ಪ್ರಾಧಿಕಾರ ರೂಪುದಳೆದ ಈ 24 ವರ್ಷಗಳಲ್ಲಿ ಸಮರ್ಥ ಅಧ್ಯಕ್ಷರು ಅದರ ಭಾಗವಾಗಿ ಕಾರ್ಯನಿರ್ವಹಿಸಿದ್ದಲ್ಲದೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಾರಣರಾಗಿದ್ದಾರೆ. ಪುಸ್ತಕಸಂಸ್ಕೃತಿಗೆ ಹೊಸ ಅರ್ಥವನ್ನೇ ತಂದು ಕೊಟ್ಟಿದ್ದಾರೆ. ಅವರವರ ಅಧಿಕಾರಾವಧಿಯಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳ ಕುರಿತ ಒಂದು ಪಕ್ಷಿನೋಟ:

 1. ಪ್ರೊ. ಎಲ್. ಎಸ್. ಶೇಷಗಿರಿರಾವ್ ( 20-10-1993 ರಿಂದ 05-06-1995)

      ಕನ್ನಡದ ಶ್ರೇಷ್ಠ ವಿಮರ್ಶಕರೂ ವಿದ್ವಾಂಸರು ಆದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು  ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು. ಪ್ರಾಧಿಕಾರಕ್ಕೆ ಭದ್ರ ಬುನಾದಿ ಹಾಕುವ ಮೂಲಕ ಅದರ ಬೆಳವಣಿಗೆ ರೂಪುರೇಷೆಗಳ ಕನಸು ಹಂಚಿಕೊಂಡವರು. ಜನಪ್ರಿಯ ಪುಸ್ತಕಮಾಲೆ, ವಿಜ್ಞಾನ ಪುಸ್ತಕಮಾಲೆ, ಮೂಲಭೂತ ಶೈಕ್ಷಣಿಕ ಮಾಲೆಯಂಥ ಹಲವಾರು ಪ್ರಕಟಣಾ ಮಾಲೆಗಳನ್ನು ಆರಂಭಿಸಿದರು. ಪ್ರಥಮ ಕನ್ನಡ ಪುಸ್ತಕ ಮೇಳವನ್ನೂ ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಸಂಘಟಿಸಿ ಯಶಸ್ವಿಗೊಳಿಸಿದರು. ಪ್ರಾಧಿಕಾರದ ಆರ್ಥಿಕ ಸುಭದ್ರತೆಗೂ ರಾಯರು ಕಾರಣಕರ್ತರಾದರು.

 2. ನೆಲಮನೆ ಕೆ. ದೇವೇಗೌಡ ( 12-06-1995 ರಿಂದ 11-06-1996)

      ಪುಸ್ತಕ ಪ್ರಪಂಚದ ಒಳಹೊರಗನ್ನು ಬಲ್ಲವರಾಗಿದ್ದ ಪ್ರೊ.ನೆಲಮನೆ ದೇವೇಗೌಡರು ರಾಜ್ಯಮಟ್ಟಕ್ಕೆ ಮಾತ್ರ ಸೀಮಿತವಾಗಬಾರದು ಪುಸ್ತಕ ಪ್ರಾಧಿಕಾರ ಎಂದು ಗ್ರಾಮ ಮಟ್ಟಕ್ಕೂ ಕೊಂಡೊಯ್ದರು. ಗ್ರಾಮ-ಪಟ್ಟಣಗಳಲ್ಲಿ, ಸಂತೆ ಮಾಳಗಳಲ್ಲಿ ಕನ್ನಡ ಪುಸ್ತಕ ಜಾತ್ರೆಗಳನ್ನು ಏರ್ಪಡಿಸಿ ಪ್ರಾಧಿಕಾರದ ದೃಷ್ಟಿ ವ್ಯಾಪಕಗೊಳಿಸಿದರು.

 3. ಪ್ರೊ. ಎಚ್.ಜೆ. ಲಕ್ಕಪ್ಪಗೌಡ ( 12-06-1998 ರಿಂದ 07-03-2001)

      ಪ್ರೊ. ಎಚ್. ಜೆ. ಲಕ್ಕಪ್ಪಗೌಡರು ಸೃಜನಶೀಲ ಹಾಗೂ ಜನಪದ ಕ್ಷೇತ್ರಗಳಲ್ಲಿ ಹೆಸರಾಂತ ಲೇಖಕರಾಗಿದ್ದು `ಜಾಗತಿಕ ಚಿಂತಕರು' ಜನಪರ ಮಾಲೆಯಂಥ ಕೆಲವು ಪ್ರಕಟಣಾ ಯೋಜನೆಗಳನ್ನು ಪ್ರಾರಂಭಿಸಿದರು. ಕನ್ನಡ ಸಾಹಿತ್ಯ ಲೋಕದ ಮೇರುಗಳಲ್ಲಿ ಒಬ್ಬರಾದ ಡಾ.ಶಂಬಾ ಜೋಷಿಯವರ ಸಮಗ್ರ ಸಾಹಿತ್ಯ ಬೃಹತ್ ಯೋಜನೆಯನ್ನು ನನಸಾಗಿಸಿದ್ದಲ್ಲದೆ `ಪುಸ್ತಕಲೋಕ' ನಿಯತಕಾಲಿಕೆಯನ್ನು ಆರಂಭಿಸಿದರು.

 4. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ (18-06-2001 ರಿಂದ 13-06-2004)

      ಮುಂದಿನ ಅಧ್ಯಕ್ಷರಾಗಿ ನಿಯೋಜಿತಗೊಂಡವರು ಕನ್ನಡ ಮತ್ತು ಸಂಸ್ಕøತ ಭಾಷಾ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶರವರು. ಅಕ್ಷರಲೋಕದ ದಿಕ್ಕೇ ತಿಳಿಯದ ಅಜ್ಞಾತವಲಯಗಳಲ್ಲಿ ಪುಸ್ತಕ ಪರಿಚಯ ಮಾಡಿಸಿದರು. ಪುಸ್ತಕ ಮೇಳಗಳನ್ನು ತಾಲ್ಲೂಕು ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಪ್ರಾಧಿಕಾರದ ಚಟುವಟಿಕೆಯ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿದವರು. ಹತ್ತು ಹಲವು ತಾಲ್ಲೂಕುಗಳಲ್ಲಿ ಪುಸ್ತಕಮೇಳಗಳನ್ನು ಏರ್ಪಡಿಸಿದ್ದಲ್ಲದೆ ಸಾಹಿತ್ಯದ ಮೈಲುಗಲ್ಲಾಗುವಂಥ ಕೆಲ ಗ್ರಂಥಗಳನ್ನು ಪ್ರಕಟಿಸಿದರು.

5. ಪ್ರೊ. ಎಸ್.ಜಿ. ಸಿದ್ಧರಾಮಯ್ಯ (22-03-2005 ರಿಂದ 31-03-2008)

      ವಿಚಾರವಾದಿ, ಕವಿ ಹಾಗೂ ಚಿಂತಕರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯನವರು ಅಧ್ಯಕ್ಷರಾಗಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಸದೃಢಗೊಳಿಸುವತ್ತ ಹೆಜ್ಜೆಹಾಕಿದರು. `ಸಂಸ್ಕೃತಿಯ ನಿರಂತರತೆ ಅರ್ಥಪೂರ್ಣತೆಗೆ ಪುಸ್ತಕಗಳು ಧಾತುರೂಪವಾಗಿ ಕಾರ್ಯನಿರ್ವಹಿಸುತ್ತವೆ, ನಿರ್ವಹಿಸಲೇ ಬೇಕು' ಎಂಬುದನ್ನು ಮನಗಂಡ ಇವರು ಯುವಶಕ್ತಿಗಳನ್ನು ಸೆಳೆದರು! ರಾಜ್ಯಾದ್ಯಂತ ವಾಚನಾಭಿರುಚಿ ಕಮ್ಮಟಗಳನ್ನು ಏರ್ಪಡಿಸುವ ಮೂಲಕ ಯುವಸಮುದಾಯದಲ್ಲಿ ಪುಸ್ತಕ-ಓದು ಕುರಿತಂತೆ ಜಾಗೃತಿ ಮೂಡಿಸಿದರು. ದೇಸೀ ಕೃಷಿ ಮಾಲೆಯಲ್ಲಿ ಪ್ರಕಟಣೆಗಳು ಹಾಗೂ ಅಲಕ್ಷಿತ ಸಮುದಾಯ- ಅಲೆಮಾರಿ ಜನಾಂಗಗಳ ಕುರಿತಂತೆ ದಾಖಲುಗೊಳಿಸುವ ಮಹತ್ವದ ಕಾರ್ಯವನ್ನು ಕೈಗೊಂಡರು.

 6. ಡಾ. ಸಿದ್ಧಲಿಂಗಯ್ಯನವರು (12-06-2008 ರಿಂದ12-06-13)

      ಕನ್ನಡದ ಪ್ರಸಿದ್ಧ ಕವಿಗಳು, ಸಾಮಾಜಿಕ ಹೋರಾಟಗಾರರಾದ ಡಾ. ಸಿದ್ಧಲಿಂಗಯ್ಯನವರ ಅವಧಿಯಲ್ಲಿ ಪ್ರಾಧಿಕಾರಕ್ಕೆ ಮತ್ತಷ್ಟು ಸಂಚಲನ ಒದಗಿತ್ತು. ಸಗಟು ಪುಸ್ತಕ ಖರೀದಿ ಯೋಜನೆಯಡಿಯಲ್ಲಿ ಸಾಮಾನ್ಯವಾಗಿ ಪ್ರಾಧಿಕಾರ ರೂ 30 ಲಕ್ಷ ಮೊತ್ತದ ಕನ್ನಡ ಪುಸ್ತಕಗಳನ್ನು ಖರೀದಿಸುತ್ತಿತ್ತು. ಸಣ್ಣ ಪ್ರಮಾಣದ ಪ್ರಕಾಶಕರಿಗೆ ನೆರವಾಗುವ ದೃಷ್ಟಿಯಿಂದ ಈ ಮೊತ್ತವನ್ನು ರೂ 75 ಲಕ್ಷಕ್ಕೆ ಹೆಚ್ಚಿಸಿದ್ದಲ್ಲದೆ ಹೆಚ್ಚುವಹಿವಾಟಿನ ಪ್ರಕಾಶಕರ ಪುಸ್ತಕಗಳನ್ನು 1 ಲಕ್ಷದವರೆವಿಗೆ ಖರೀದಿಸಲು ಮುಂದಾಗಿದ್ದು ಪ್ರಾಧಿಕಾರದ ಈ ಅವಧಿಯ ಹೆಗ್ಗಳಿಕೆ. ಅಲ್ಲದೆ;ಕನ್ನಡದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯ ಮೊತ್ತ ಹೆಚ್ಚಳ ಹಾಗೂ `ಡಾ.ಜಿ.ಪಿ.ರಾಜರತ್ನಂ ಕನ್ನಡ ಪರಿಚಾರಿಕೆಯ ಪ್ರಶಸ್ತಿ' ಯ ಸ್ಥಾಪನೆ. ವೈದ್ಯಕೀಯ ವಿಜ್ಞಾನ ಮಾಲೆ ಯೋಜನೆಯಡಿ ಪುಸ್ತಕ ಪ್ರಕಟಣೆ, ಬ್ರೈಲ್ ಲಿಪಿ ಪುಸ್ತಕಗಳ ಪ್ರಕಟಣೆ ಇವರ ಅವಧಿಯ ದಾಖಲೆಗಳು.

 ( 13-6-2013 ರಿಂದ 27-02-2014 ರವರೆಗೆ ಆಯುಕ್ತರು/ನಿರ್ದೇಶಕರ ಆಡಳಿತ)

 7. ಡಾ. ಬಂಜಗೆರೆ ಜಯಪ್ರಕಾಶ ( 28-02-2014 ರಿಂದ 25-02-2017)

      ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ. ಜಂಜಗೆರೆ ಜಯಪ್ರಕಾಶ ಅವರು ಜನಸಾಮಾನ್ಯರಲ್ಲಿ ಸಾಹಿತ್ಯಾಸಕ್ತಿ ಹುಟ್ಟುಹಾಕುವ ಸಲುವಾಗಿ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಕ್ಕೆ ತಂದರು. ಬೈಬಲ್ ಮಾದರಿಯಲ್ಲಿ ವಚನ ಸಂಪುಟ ಮುದ್ರಣ, ಡಾ. ಎಂ.ಎಂ.ಕಲಬುರ್ಗಿಯವರ ಹೆಸರಿನಲ್ಲಿ ರೂ.75000/-ಗಳ ಮೌಲ್ಯದ `ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ' ಸ್ಥಾಪನೆ. ಪುಸ್ತಕ ಸೊಗಸು ಯೋಜನೆಯಡಿ ಮುಖಪುಟ ವಿನ್ಯಾಸ ಹಾಗೂ ಮುಖಪುಟ ಕಲೆಗೆ ಬಹುಮಾನ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಆಯೋಜನೆ, ಸಗಟು ಖರೀದಿ ಮಾಡಿರುವ ಪುಸ್ತಕಗಳನ್ನು ರಾಜ್ಯದಾದ್ಯಂತ 775 ಶಾಲಾ ಕಾಲೇಜುಗಳಿಗೆ ಹಾಗೂ ಬಾಲಮಂದಿರಗಳಿಗೆ ವಿತರಣೆ.

(04-02-2017 ರಿಂದ 08-08-2017 ನಿರ್ದೇಶಕರ ಆಡಳಿತ)

 8. ಡಾ|| ವಸುಂಧರಾ ಭೂಪತಿ ( 09.08.2017 ರಿಂದ

      2017 ರಿಂದ ಪ್ರಾಧಿಕಾರದ ಇತಿಹಾಸದಲ್ಲಿಯೇ ಮೊದಲ ಮಹಿಳಾ ಅಧ್ಯಕ್ಷರಾಗಿ ನೇಮಕವಾದವರು ಡಾ.ವಸುಂಧರಾ ಭೂಪತಿಯವರು. ಯಾವುದೇ ಹುದ್ದೆಯಲ್ಲಿರಲಿ ಅದಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ತಮ್ಮ ಎಂದಿನ ವೈಖರಿಯಂತೆ ಪ್ರಾಧಿಕಾರದಲ್ಲಿಯೂ ಹಲವು ಹತ್ತು ಯೋಜನೆಗಳ ಕನಸನ್ನು ಹೊತ್ತು ಬಂದದ್ದಲ್ಲದೆ ಕೆಲವು ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಿದ್ದಾರೆ.

      ಅವುಗಳಲ್ಲಿ ಪುಸ್ತಕ ಜಾಥಾ, ವಿಶೇಷ ಪುಸ್ತಕ ಖರೀದಿ ಹಾಗೂ ಉಚಿತ ವಿತರಣೆ, ಪ್ರಕಾಶಕರ ವಿಳಾಸಗಳನ್ನೊಳಗೊಂಡ ಪುಸ್ತಕ ಪ್ರಕಟಣೆ ಅಲ್ಲದೆ ಪ್ರೌಢಶಾಲಾ ಮಟ್ಟದಲ್ಲಿ ವಾಚನಾಭಿರುಚಿ ಹೆಚ್ಚಿಸುವ ಪ್ರಯತ್ನದ ಅಂಗವಾಗಿ ರಾಜ್ಯದಾದ್ಯಂತ `ಅಚ್ಚುಮೆಚ್ಚಿನ ಪುಸ್ತಕ ಕಾರ್ಯಕ್ರಮ' ಹಮ್ಮಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾಣ-ಜಾಣೆಯರ ಬಳಗ, ಪ್ರಕಾಶಕರ ಸಮ್ಮೇಳನ, ಪುಸ್ತಕೋದ್ಯಮ ನಡೆದು ಬಂದ ದಾರಿಯ ಕುರಿತು ಸಂಪುಟ ರಚನೆ ಹೀಗೆ ಹಲವಾರು ಯೋಜನೆಗಳನ್ನು ರೂಪಿಸಿರುವುದಲ್ಲದೆ ಅವುಗಳ ಅನುಷ್ಠಾನ ಹತ್ತಿರದಲ್ಲಿಯೇ ಇದೆ.

 ***

      ಒಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಸಮರ್ಥ ಅಧ್ಯಕ್ಷರ ಅವಧಿಯಲ್ಲಿ ಪುಸ್ತಕ ಪ್ರಕಟಣೆ, ಪ್ರಕಾಶನ, ಮಾರಾಟ ಮತ್ತು ವಾಚನಾಭಿರುಚಿಗೆ ಇಂಬು ಕೊಡುವ ನಾನಾ ಯೋಜನೆಗಳನ್ನು ರೂಪಿಸುವುದರೊಂದಿಗೆ ಕಾರ್ಯರೂಪಕ್ಕೆ ತರುವಲ್ಲಿಯೂ ಯಶಸ್ವಿಯಾಗಿದೆ.

      ಮೂಲಧ್ಯೇಯೋದ್ದೇಶಗಳ ತಳಹದಿಯ ಮೇಲೆ ಕೆಲ ಪ್ರಯತ್ನಗಳನ್ನು ಮಾಡಿ ಪ್ರಾಧಿಕಾರದ ಅಸ್ತಿತ್ವ, ಕಾರ್ಯವೈಖರಿಯ ಕುರಿತು ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದೆ. 

  • ಕನ್ನಡ ಭವನದ ಆವರಣದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯ ಉದ್ಘಾಟನೆ. ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲಾ ಅಕಾಡೆಮಿಗಳ ಪ್ರಕಟಣೆಗಳು ಒಂದೆಡೆ ದೊರೆಯುವ ಸೌಲಭ್ಯದ ರೂಪಣೆ.
  • ಕಾಸರಗೋಡು, ಮಹಾರಾಷ್ಟ್ರ ಗಡಿಪ್ರದೇಶ, ತಮಿಳುನಾಡು ಗಡಿ ಪ್ರದೇಶಗಳಲ್ಲಿನ ಕನ್ನಡ ಶಾಲೆ, ಕಾಲೇಜು ಮತ್ತು ಕನ್ನಡಪರ ಸಂಸ್ಥೆಗಳಿಗೆ ಪುಸ್ತಕಗಳ ವಿತರಣೆ.
  • ಅಲೆಮಾರಿ ಸಂಸ್ಕೃತಿ ಅಧ್ಯಯನ ಮಾಲೆಯನ್ನು ಮುಂದುವರೆಸಿ ಉಳಿದ 21 ಪುಸ್ತಕಗಳ ಪ್ರಕಟಣೆ ಹಾಗೂ ಬಿಡುಗಡೆ.
  • ಕನ್ನಡದ ಪ್ರಾತಿನಿಧಿಕ ಕೃತಿಗಳನ್ನು ಬ್ರೈಲ್ ಲಿಪಿಗೆ ಅಳವಡಿಸುವ ಯೋಜನೆಯಡಿ ಪುಸ್ತಕಗಳ ಪ್ರಕಟಣೆ.
  • ವೈದ್ಯ ವಿಜ್ಞಾನ ಸಾಹಿತ್ಯ ಮಾಲೆ ಹಾಗೂ ಕನ್ನಡ ನಾಡು ನುಡಿಗೆ ಹೋರಾಡಿದ ಹಿರಿಯ ಚೇತನಗಳ ಜೀವನ ಚರಿತ್ರೆ ಕುರಿತ ಕನ್ನಡ ಕಟ್ಟಿದವರು ಮಾಲೆಯಲ್ಲಿ ಪುಸ್ತಕ ಪ್ರಕಟಣೆ.
  • ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆತ ಸಂದರ್ಭಕ್ಕೆ ಪೂರಕವಾಗಿ ಹಳಗನ್ನಡ ಗ್ರಂಥಗಳ ಪ್ರಕಟಣೆ.
  • ಕನ್ನಡ ಪುಸ್ತಕ ನೀತಿ ಪುನರ್ ರೂಪಿಸಿ ಸ್ಪಷ್ಟರೂಪ ನೀಡಿ ಸರ್ಕಾರಕ್ಕೆ ವಿದ್ಯುಕ್ತವಾಗಿ ಸಲ್ಲಿಸಿದ್ದು.
  • ಮೈಸೂರು ದಸರಾ ಸಂದರ್ಭ ಒಳಗೊಂಡಂತೆ ಕೆಲ ಜಿಲ್ಲೆಗಳಲ್ಲಿ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ.
  • ಪ್ರಾಧಿಕಾರದ ವೆಬ್ ಸೈಟ್‍ನಲ್ಲಿ ಪುಸ್ತಕ ಸೂಚಿ ಅಳವಡಿಕೆ
  • ಎಲ್ಲ ಜಿಲ್ಲೆಗಳಲ್ಲಿ ವಿಶ್ವ ಪುಸ್ತಕ ದಿನಾಚರಣೆ
  • ರಾಜ್ಯದ 41 ಸ್ಥಳಗಳಲ್ಲಿ ವಾಚನಾಭಿರುಚಿ ಕಮ್ಮಟ ಹಾಗೂ ವಿವಿಧ ವಿಚಾರ ಸಂಕಿರಣಗಳು
  • ಶ್ರೀಮತಿ ಅನುಪಮಾ ನಿರಂಜನ ವೈದ್ಯಕೀಯ ಸಾಹಿತ್ಯ ಪ್ರಶಸ್ತಿಯನ್ನು `ಡಾ. ಅನುಪಮಾ ವೈದ್ಯಕೀಯ ಹಾಗೂ ವಿಜ್ಞಾನ ಪ್ರಶಸ್ತಿ' ಎಂದು ಮರು ವಿನ್ಯಾಸಗೊಳಿಸಲಾಯಿತು.
  • ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಎಂಬ ಹೊಸ ಯೋಜನೆ ಮೂಲಕ ರಾಜ್ಯದಾದ್ಯಂತ 2015-16ನೇ ಸಾಲಿನಲ್ಲಿ 196 ಕಾಲೇಜುಗಳಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟಿಸುವಂತಹ ವಿವಿಧ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಗಿದ್ದು ಸುಮಾರು 188 ಕಾರ್ಯಕ್ರಮಗಳನ್ನು ನಡೆಸಲಾಯಿತು. 2016-17ನೇ ಸಾಲಿನಲ್ಲಿ 86 ಕಾಲೇಜುಗಳಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟಿಸುವಂತಹ ವಿವಿಧ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಗಿದ್ದು ಸುಮಾರು 128 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.
  • ವಿವಿಧ ಸಾಹಿತ್ಯಮಾಲೆ ಯೋಜನೆಯಡಿಯಲ್ಲಿ ಮೌಲಿಕ ಪುಸ್ತಕಗಳನ್ನು ಪ್ರಕಟಿಸಲಾಯಿತು. ಪುಸ್ತಕಲೋಕ ತ್ರೈಮಾಸಿಕದ ಸಂಪುಟಗಳ ಮುದ್ರಣ.
  • ಪ್ರಶಸ್ತಿ ಪುರಸ್ಕೃತರು ಹಾಗೂ ಮುದ್ರಣ ನಡೆದು ಬಂದ ದಾರಿ ಕುರಿತು ಸಾಕ್ಷ್ಯಚಿತ್ರಗಳ ನಿರ್ಮಾಣ.
  • ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳ ಆರಂಭ.

ಇತ್ತೀಚಿನ ನವೀಕರಣ​ : 05-01-2021 11:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080